ಶುಕ್ರವಾರ, ಜೂನ್ 5, 2009

ಮಹಿಳೆಗೂ ಸ್ವಂತ ಬದುಕು ರೂಪಿಸಿಕೊಳ್ಳಲು ಅವಕಾಶ ಬೇಡ್ವೇ!

ಎಲ್ಲರೂ ಮುಖವಾಡ ಧರಿಸಿಯೇ ಬದುಕುವವರು. ಸಮಾನತೆ, ಸಾಮಾಜಿಕತೆ, ಮೌಲ್ಯಗಳ ಬಗ್ಗೆ ಭಾಷಣ ಬಿಗಿಯುವವರೇ. ಸಂಸ್ಕೃತಿ ಕುರಿತಂತೂ ಮುತಾಲಿಕನಿಗಿಂತಲೂ ಉದ್ದುದ್ದದವರು ಸಂಘಟನೆಗಳನ್ನು ಮಾಡಿಕೊಂಡು, ತಮಗಿಷ್ಟ ಬಂದಂತೆ, ಇತರರನ್ನು ಶೋಷಿಸುತ್ತಿದ್ದಾರೆ. ಬಹುತೇಕ ಎಲ್ಲರ ಮನೆಗಳಲ್ಲಿಯೂ ತಂದೆ, ತಾಯಿ, ಅಜ್ಜ ಅಜ್ಜಿಯರಿಗೆ ತಮ್ಮ ಮನೆಯ ಮಕ್ಕಳಲ್ಲಿ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ, ಪ್ರೀತಿ, ವಾತ್ಸಲ್ಯ, ಸಂಸ್ಕೃತಿ, ಸಂಪ್ರದಾಯಗಳ ಹೆಸರಿನಲ್ಲಿ ಬಹಳ ತಾರತಮ್ಯ ಮಾಡುತ್ತಿದ್ದಾರೆ. ಎಲ್ಲ ಸಂಪ್ರದಾಯ, ಕಂದಾಚಾರ, ಮೂಢ ನಂಬಿಕೆಗಳು, ವೃತಗಳು ಎಲ್ಲವನ್ನೂ ಮಹಿಳೆಯರಿಗೆ ಮಾತ್ರ ವಹಿಸಿ, ಗಂಡಸರನ್ನು ಆರಾಮವಾಗಿ, ಸೋಮಾರಿ ಕಟ್ಟೆಗಳಲ್ಲಿ, ಹೋಟೆಲು, ಬಾರು, ಕ್ಲಬ್ಬು,..ಗಳಲ್ಲಿ ಕಾಳಕಳೆಯುವಂತೆ ಮಾಡಿದೆ ನಮ್ಮ ಸಂಸ್ಖೃತಿ!

- ಗಂಡು ಮಗನಿಗೆ ಎಲ್ಲಿಗೆ ಬೇಕಾದರೂ, ಎಷ್ಟು ಹೊತ್ತಿಗೆ ಬೇಕಾದರೂ, ಹೋಗಿ ಬರುವ ಸ್ವಾತಂತ್ಯ್ರ ಕೊಟ್ಟದ್ದಾರೆ. ಹೆಣ್ಣು ಮಕ್ಕಳಿಗೆ ಸುರಕ್ಷತೆ/ರಕ್ಷಣೆಯ ಹೆಸರಿನಲ್ಲಿ ಕಟ್ಟು ನಿಟ್ಟಾಗಿ ಮನೆಯಲ್ಲಿರುವಂತೆ ಮಾಡುತ್ತಾರೆ! ಹೀಗಾಗಿ ಗಂಡು ಹುಡುಗರು ಪೋಲಿ ಬಿದ್ದುಹೋಗುತ್ತಿದ್ದಾರೆ.
- ಅವನು ಗಹಗಹಿಸಿ ನಗಬೇಕು, ಇವಳು ಮರ್ಯಾದೆಯ ಹೆಸರಿನಲ್ಲಿ ತನ್ನಿಷ್ಟದಂತೆ ನಗಲೂ ಸ್ವಾತಂತ್ಯ್ರವಿಲ್ಲದೇ ಬದುಕಬೇಕು!
- ಮಗಳಿಗೆ ಹೊರಹೋಗುವಾಗ 'ಯಾರು ಏನು ಹೇಳಿದರೂ, ಸೀಟಿ ಹೊಡೆದರೂ, ನೀನು ಅದರ ಕಡೆ ಗಮನ ಕೊಡದೇ, ತಲೆ ಬಗ್ಗಿಸಿಕೊಂಡು ಬರಬೇಕು/ಹೋಗಬೇಕು' ಅಂತಾ ಬುದ್ಧಿ ಹೇಳುತ್ತಾರೆ. ಆದರೆ ಗಂಡು ಮಗನಿಗೆ 'ನೋಡಪ್ಪ, ಎಂದೂ ಹೆಣ್ಣು ಮಕ್ಕಳನ್ನು ಗೋಳು ಹುಯ್ದುಕೊಳ್ಳಬೇಡ, ಅವರನ್ನು ಕಾಡ ಬೇಡ, ಅವರನ್ನು ಗೌರವಿಸು' ಅಂತಾ ಯಾರಾದರೂ ಬುದ್ಧಿ ಹೇಳಿ ಹೊರಗೆ ಕಳಿಸ್ತಾರ?!
- ಗಂಡು ಮಗ ಎಷ್ಟು ಸಲ ಫೇಲಾದರೂ ಸರಿ, ಅವನಿಗೆ ಹೇಗಾದರೂ ಮಾಡಿ ಹಣ ಕೊಟ್ಟು ಮತ್ತೆ ಮತ್ತೆ ಪರೀಕ್ಷೆ ಕಟ್ಟಿಸ್ತಾರೆ, ಅವನ ಕಾಲ ಮೇಲೆ ಅವನು ನಿಲ್ಲಲಿ ಎಂದು ಸಾಲಮಾಡಿ, ಮನೆ ಆಸ್ತಿ ಎಲ್ಲ ಮಾರಿ ಬೇಕಾದರೂ ಬಂಡವಾಳ ಹಾಕಿ ಕೊಡ್ತಾರೆ. ಆದರೆ ಹೆಣ್ಣು ಮಗಳಿಗೆ ಎಷ್ಟು ಓದಿದರೂ ಕಂಡವರ ಮನೆ ಪಾತ್ರೆ ತೊಲೆಯೋದು ತಪ್ಪಲ್ಲ ಅಂತಾರೆ. ಮಗಳಿಗೆ ಒಂದು ಗಂಡು ನೋಡಿ ಮದುವೆಮಾಡಿ, ಗಂಡನ ಮನೆಗೆ ಕಳಿಸಿಬಿಟ್ಟರೆ ಅದೇ ಜನ್ಮ ಪಾವನ ಅಂತಾ ಮದುವೆ ಮಾಡಿ ಕಳಿಸಿ ಬಿಡ್ತಾರೆ.
- ಅವಳ ಗಂಡ ಎಂತಹ ನಾಲಾಯಕ್ಕಾದರೂ ಸರಿ ಅವಳಿಗೆ 'ಕೊಟ್ಟ ಹೆಣ್ಣು ಕುಲಕ್ಕೆ ಹೊರಗು' 'ಅತ್ತೆ ಮಾವನ ಸೇವೆ ಮಾಡಿ, ಗಂಡನನ್ನು ಸಹಿಸಿಕೊಂಡು, ತವರು ಮನೆ ಹೆಸರುಳಿಸು' ಅಂತಾ ಒಂದಷ್ಟು ಒಳ್ಳೆ ಗಾದೆ/ಹಾಡು/ಮಾತುಗಳನ್ನು ಹೇಳಿ, ತಲೆ ಸವರಿ, ಬಲಿಪಶುವಂತೆ ಮಾಡಿ, ಕೈ ಚೆಲ್ಲಿ ಕುಳಿತುಬಿಡ್ತಾರೆ.
- 'ಉದ್ಯೋಗಂ ಪುರುಷ ಲಕ್ಷಣಂ' ಅಂತಾ ಗಾದೆ ಮಾಡಿ, ಉದ್ಯೋಗ, ಹಣ, ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಗಂಡಸರಿಗೆ ಮಾತ್ರ ಮೀಸಲು ಮಾಡಿ, ಹೆಣ್ಣು ಮನೆಯೊಳಗೆ ಕೊಳೆಯುವಂತೆ, ದುಡಿಮೆಗೆ ತಕ್ಕ ಫಲದೊರೆಯದಂತೆ, ಮೂಲೆಗುಂಪಾಗುವಂತೆ ಮಾಡಿದರು.
- ಹೆಣ್ಣನ್ನು ಲಕ್ಷ್ಮೀ ಅಂತಾರೆ, ಆದರೆ ಕಾಸು ಮಾತ್ರ ಗಂಡಸರ ಕೈಯಲ್ಲಿಯೇ ಇರಬೇಕಂತೆ!
- ಸರಸ್ವತೀ ಅಂತಾರೆ, ಆದರೆ ತನ್ನಿಷ್ಟ ಬಂದಷ್ಟು ಓದಲು/ಕಲಿಯಲು ಮಾತ್ರ ಅವಕಾಶ ಕೊಡುವುದಿಲ್ಲ!
- ಮದುವೆ ಮಾಡಿ ಅವಳಿಗೆ ತಾಳಿಕಟ್ಟಿಸಿ, ಕಾಲುಂಗುರ ತೊಡಿಸಿ (ಬ್ಯಾಂಕಿನವರು ಸಾಲಕೊಟ್ಟ ಎಮ್ಮೆಗೆ ಕಿವಿಯಲ್ಲಿ ಮುರು ಹಾಕಿ ಇದು ನಮ್ಮದು ಅಂತಾ ಗುರುತು ಮಾಡ್ತಾರೆ ಹಾಗೆ) ಅವನಿಗೆ ಮಾತ್ರ ಏನೂ ಇಲ್ಲದೆ ಒಳ್ಳೆ ಹೋರಿಯ ಹಾಗೆ ಬಿಟ್ಟು ಬಿಡ್ತಾರೆ!
- '೧೦ ಪಂಚೆ ಬೇಕಾದರೆ ಒಟ್ಟಿರುತ್ತವೆ ಆದರೆ ೪ ಜಡೆ ಒಟ್ಟಿಗಿರಲ್ಲ' ಅಂತ ಗಾದೆ ಕಟ್ಟಿದರು, ಆದರೆ ಈಗ ಯಶಸ್ವಿಯಾಗಿ ಮಹಿಳಾ ಸ್ವ-ಸಹಾಯ ಸಂಘಗಳೇ ಕುಟುಂಬವನ್ನು, ಊರನ್ನು ಉದ್ಧಾರ ಮಾಡುತ್ತಿರುವುದು! ಈ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಉಳಿತಾಯ ಮಾಡದಿದ್ದಲ್ಲಿ ಇಷ್ಟು ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಸಾರಾಯಿ ಅಂಗಡಿಯವರ ಪಾಲಾಗುತ್ತಿತ್ತು.
- ಮಹಿಳೆಯರನ್ನು ಸ್ವಸಹಾಯ ಸಂಘಗಳ ವಾರದ ಸಭೆಗೆ ಗಂಡಸರು ಕಳುಹಿಸುತ್ತಿರುವುದೇಕೆ ಗೊತ್ತೇ? ಅವಳು ಸಶಕ್ತಳಾಗಲಿ, ಪ್ರಪಂಚ ಜ್ಙಾನ ಬೆಳೆಯಲಿ ಅಂತಾ ಅಲ್ಲ, ಅವಳಿಂದ ಮನೆಯ ಗಂಡಸರಿಗೆ ಸುಲಭವಾಗಿ, ಸರಳವಾಗಿ, ಸುಲಭ ಕಂತುಗಳಲ್ಲಿ, ಮರ್ಯಾದೆಯಾಗಿ, ಬೇಕಾದಾಗ ಸಾಲ ಸಿಗುತ್ತದೆ ಅಂತಾ ಅಷ್ಟೇ!
- ಅವನು ಹೆಚ್ಚು ಹೆಣ್ಣು ಮಕ್ಕಳ ಜೊತೆ ಸಂಪರ್ಕ ಮಾಡಿದರೆ, ಅವನಿಗೆ ರೋಮಿಯೋ, ರವಿಚಂದ್ರ, ಗೌಡ, ರಾಜ, ಕೃಷ್ಣ, ಗಂಡಸು, ... ಎನ್ನುವ ಒಳ್ಳೆಯ ಪದಗಳಿಂದಲೇ ಸಂಭೋಧಿಸುತ್ತದೆ ಸಮಾಜ.
- ಕಟ್ಟಿಕೊಂಡ ಗಂಡ ದುಡಿಯದೇ, ಕುಡುಕನಾಗಿ, ಹೆಂಡತಿ ದುಡಿದಿದ್ದನ್ನೂ ಕುಡಿದು, ಮನೆ ಸಾಮಾನುಗಳನ್ನೂ ಮಾರಿಕೊಂಡು ಕುಡಿದು ಜೂಜಾಡಿ ಹಾಳು ಮಾಡಿದರೆ, ಮನೆಯ ಮಕ್ಕಳ ಜವಾಬ್ಧಾರಿ, ವಯಸ್ಶಾದವರ ಜವಾಬ್ಧಾರಿಯನ್ನು ಹೊತ್ತ ಹೆಂಡತಿ ಕೇವಲ ಕೂಲಿಯಿಂದ ಮನೆ ಸಾಗಿಸಲಾಗದೇ, ಇಷ್ಟವಿಲ್ಲದಿದ್ದರೂ ಇನ್ನೊಬ್ಬನಿಗೆ ಸುಖ ನೀಡಿ ಗಳಿಸಿದ ಹಣದಿಂದ ಕುಟುಂಬ ನಡೆಸುವ ಅನಿವಾರ್ಯ ಪರಿಸ್ಥಿತಿಯಲ್ಲಿ ಅದೆಷ್ಟೋ ಹೆಣ್ಣುಮಕ್ಕಳು ನರಳುತ್ತಿದ್ದಾರೆ.

ಹೆಣ್ಣುಗಂಡಿನ ಅಸಮಾನ ಅಧಿಕಾರ ಸಂಬಂಧಗಳ ಬಗ್ಗೆ, ದೇವದಾಸಿ ಪದ್ಧತಿ, ಲೈಂಗಿಕ ವೃತ್ತಿಗೆ ತಳ್ಳಲ್ಪಟ್ಟ ಮಹಿಳೆಯರ ಬಗ್ಗೆ ಮುತಾಲಿಕರಂತವರು, ಕಣ್ಣು ಮುಚ್ಚಿಕುಳಿತಿರೋದು ಯಾಕೆ?! ಒಂದು ಕಡೆ ಮಹಿಳೆಯರಿಗಾಗಿ, ಅವರ ಸಶಕ್ತತೆಗಾಗಿ, ಬಾಯಿಬಾಯಿ ಬಡಕೊಂಡು ಸ್ಕೀಮುಗಳನ್ನು ಹಾಕೋ ಸರ್ಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು, ಮಹಿಳೆಯರ ಪರವಾದ ಧೋರಣೆಗ/ಪಾಲಿಸಿಗಳನ್ನು ಎಷ್ಟರ ಮಟ್ಟಿಗೆ ಜಾರಿಗೆ ತಂದಿವೆ?!

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕೇವಲ ಪುರುಷರು ಮಾತ್ರ ಕಾರಣವಲ್ಲ ಮಹಿಳೆಯರೂ ಕಾರಣರಾಗಿದ್ದಾರೆ. ಹೆಣ್ಣು ಎಂದರೆ ತನಗೆ ತಗ್ಗಿ, ಬಗ್ಗಿ, ಕೂಲಿ ಪಡೆಯದ ಆಳಾಗಿರ ಬೇಕು ಎಂದು ಪುರುಷರು ಹೇಗೆ ನಿರೀಕ್ಷಿಸುತ್ತಿದ್ದಾರೆಯೋ, ಹಾಗೆಯೇ ಮಹಿಳೆಯರೂ ಸಹ ನನ್ನ ಅಜ್ಜಿ, ಅಮ್ಮ, ಅತ್ತೆ ಹೀಗಿದ್ದರು, ನಾನು ಹೀಗಿರುವೆ, ನನ್ನ ಮಗಳೂ, ಸೊಸೆಯೂ, ಮೊಮ್ಮಗಳೂ ಹೀಗಿಯೇ ನನ್ನಂತೆಯೇ ಕೋಣೆಯೊಳಗೇ ಪರುಷನ ಆಳಾಗಿ ಇರಬೇಕು ಎಂದು ಮಕ್ಕಳ ಮೇಲೆ ಹೇರುವ ಅರ್ಥವಿಲ್ಲದ ಕಟ್ಟಳೆಗಳೂ ಮಹಿಳೆಯ ಜೀವನವನ್ನು ದುರ್ಬಲಗೊಳಿಸಿ ಅಪಾಯಕ್ಕೀಡು ಮಾಡುತ್ತಿವೆ.ಹೆಣ್ಣಿಗೆ ಮದುವೆಯೊಂದೇ ಮೋಕ್ಷ ಎನ್ನುವ ಧೋರಣೆ ನಮ್ಮ ಸಮಾಜದಲ್ಲಿ ಅಳಿದುಹೋಗಿ, ಹೆಣ್ಣುಮಕ್ಕಳು ಸಹ ಅವರ ಕಾಲಮೇಲೆ ಅವರು ನಿಲ್ಲುವಂತೆ ಮಾಡಲು, ಅವರಿಗೂ ಆಯ್ಕೆಯ ಅಧಿಕಾರವನ್ನು ನೀಡಿ, ಅವರ ಜೀವನ ಅವರು ರೂಪಿಸಿಕೊಳ್ಳುವಂತೆ, ಗಂಡು ಮಕ್ಕಳಿಗೆ ಕೊಡುವಷ್ಠೇ ಪ್ರಾಮುಖ್ಯತೆಯನ್ನು ಹೆಣ್ಣು ಮಕ್ಕಳಿಗೆ ಕೊಡದಿದ್ದಲ್ಲಿ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಕೊನೆಯಿರುವುದಿಲ್ಲ.

ಹೌದು, ಕಾಲ ಬದಲಾಗುತ್ತಿದೆ, ಮಹಿಳೆಯೂ ಮನೆಯಿಂದ ಹೊರಬಂದು, ಕೈಗಾರಿಕೆಗಳಲ್ಲಿ ತೊಡಗುತ್ತಿದ್ದಾರೆ, ಉದ್ಯಾಮಿಗಳಾಗಿದ್ದಾರೆ, ಐಟಿಗಳಲ್ಲಿದ್ದು ಕೈತುಂಬಾ ಹಣಗಳಿಸುತ್ತಿದ್ದಾರೆ, ಎಲ್ಲ ಕ್ಷೇತ್ರಗಳಲ್ಲಿಯೂ ಪ್ರವೇಶಿಸಿ ಸಮರ್ಥವಾಗಿ ತಮ್ಮ ಕ್ಷೇತ್ರವನ್ನು ಬಲಪಡಿಸಿಕೊಳ್ಳುತ್ತಿದ್ದಾರೆ. ಆದರೆ, ಅವರ ಮೇಲಾಗುತ್ತಿರುವ ದೌರ್ಜನ್ಯಗಳು ನಿಂತಿಲ್ಲ! ಇದಕ್ಕೆಕಾರಣ ಈ ಬದಲಾವಣೆಯನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಲು ಇತರ ಮನಸ್ಸುಗಳು ಸಿದ್ಧಗೊಳ್ಳುತ್ತಿಲ್ಲ. ಬದಲಾವಣೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು, ವಾತಾವರಣವನ್ನು ಸೃಷ್ಠಿಸಲು ಸಮರ್ಪಕ ಪ್ರಯತ್ನದ ಕೊರತೆ ಇದೆ. ಸರ್ಕಾರ, ಸ್ವಯಂಸೇವಾ ಸಂಸ್ಥೆಗಳು ಎಲ್ಲ ಯೋಜನೆಗಳಿಗೂ, ಕಾರ್ಯಕ್ರಮದ ಅನುಷ್ಠಾನಗಳಿಗೂ ಮಹಿಳೆಯರನ್ನೇ ಗುರಿಯಾಗಿಸಿವೆ. ಮಹಿಳೆ ಮನೆಯ ಒಳಗೆ ಹಾಗೂ ಹೊರಗೆ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾಳೆ. ಇದು ಮಹಿಳೆಯ ಹೊರೆಯನ್ನು ಹೆಚ್ಚಿಸುತ್ತಿದೆ. ಪುರುಷರು ಆರಾಮವಾಗಿ, ದುರಭ್ಯಾಸಗಳ ದಾಸರಾಗಿ, ಡೋಲಾಯಮಾನ ಪರಿಸ್ಥಿತಿಗೆ ಹೋಗುತ್ತಿದ್ದಾರೆ. ಮಹಿಳೆಯರನ್ನು ಸಶಕ್ತಗೊಳಿಸುವ ಸಂದರ್ಭದಲ್ಲಿ ಪುರುಷರ ಕಡೆಗೂ ಗಮನ ಹರಿಸಿ ಕಾರ್ಯತಂತ್ರಗಳನ್ನು ರೂಪಿಸದಿದ್ದಲ್ಲಿ, ಸಮಾಜದ ಸ್ವಾಸ್ಥ್ಯ ಇನ್ನೂ ಹದಗೆಡುವ ಸಾಧ್ಯತೆ ಇದೆ.